ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಚಿಕ್ಕಬಳ್ಳಾಪುರ: ಅಧಿಕಾರಿಗಳು ಸಾರ್ವಜನಿಕರ ಜೊತೆ ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕು-ಸಚಿವ ಮುಮ್ತಾಜ್ ಅಲಿ ಖಾನ್

ಚಿಕ್ಕಬಳ್ಳಾಪುರ: ಅಧಿಕಾರಿಗಳು ಸಾರ್ವಜನಿಕರ ಜೊತೆ ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕು-ಸಚಿವ ಮುಮ್ತಾಜ್ ಅಲಿ ಖಾನ್

Sat, 05 Dec 2009 15:58:00  Office Staff   S.O. News Service
ಚಿಕ್ಕಬಳ್ಳಾಪುರ ಡಿಸೆಂಬರ್ ೦೫: ಸಾರ್ವಜನಿಕರಿಂದ ಸ್ವೀಕರಿಸಿದ ಕುಂದುಕೊರತೆಗಳ ಅರ್ಜಿಗಳಿಗೆ ಒಂದು ತಿಂಗಳೊಳಗೆ ಪರಿಹಾರ ಕ್ರಮ ಕೈಗೊಂಡು ಅವರಿಗೆ ಸೂಕ್ತ ಉತ್ತರ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಕ್ಫ್ ಮತ್ತು ಅಲ್ಪಸಂಖ್ಯಾತರ ಖಾತೆ ಸಚಿವ ಡಾ. ಮುಮ್ತಾಜ್ ಅಲಿ ಖಾನ್ ರವರು ತಿಳಿಸಿದರು.
  
ಅವರು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ಕಸಬ ಹೋಬಳಿಯ ಮಂಚನಬಲೆ ಗ್ರಾಮದಲ್ಲಿ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
  
ಸರ್ಕಾರದಿಂದ ಯಾವ ಯಾವ ಸೌಲಭ್ಯಗಳು ಇವೆ ಹಾಗೂ ಕಾರ್ಯಕ್ರಮದ ಬಗ್ಗೆ ಆನೇಕ ಗ್ರಾಮೀಣ ಜನರಿಗೆ ತಿಳಿದಿಲ್ಲ. ಜನರಿಗೆ ಕಾರ್ಯಕ್ರಮದ ಬಗ್ಗೆ ಅರಿವು ಇದ್ದಾಗ ಮಾತ್ರ ಅವರು ತಮಗೆ ಸಿಗಬೇಕಾದ ಸೌಲಭ್ಯಗಳನ್ನು ಕೇಳಿ ಪಡೆಯುತ್ತಾರೆ ಎಂದು ತಿಳಿಸಿದರು.
  
ಸಾರ್ವಜನಿಕರು ಅಧಿಕಾರಿಗಳೊಂದಿಗೆ ನೇರ ಸಂಪರ್ಕವನ್ನು ಇಟ್ಟಿಕೊಳ್ಳುವಂತಹ ಅಭ್ಯಾಸ ರೂಡಿಸಿಕೊಳ್ಳಬೇಕು ಮತ್ತು ಅಧಿಕಾರಿಗಳನ್ನು ಗೌರವದಿಂದ ಕಾಣುವುದರ ಜೊತೆಗೆ ಅವರ ಮೇಲೆ ಯಾವ ಸಾರ್ವಜನಿಕನು ಕೂಡ ಕೈ ಎತ್ತಬಾರದು. ಒಂದು ವೇಳೆ ಅಧಿಕಾರಿಗಳು ನಿಮ್ಮ ಕೆಲಸಗಳನ್ನು ಮಾಡಿಕೊಡಲು ಹಣ ಕೇಳಿದರೆ ಕೂಡಲೆ ನನಗೆ ತಿಳಿಸಿ ಅಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತೇನೆ. ಅಧಿಕಾರಿಗಳು ಕೂಡ ಸಾರ್ವಜನಿಕರು ತಮ್ಮ ಕಛೇರಿಗಳಿಗೆ ಕೆಲಸಕ್ಕಾಗಿ ಬಂದಾಗ ಅವರ ಜೊತೆ ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕು ಎಂದರು.
  
ಶಾಸಕ ಕೆ.ಪಿ.ಬಚ್ಚೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ತಾಲ್ಲೂಕಿನಲ್ಲಿ ಜನಸ್ಪಂದನ ಕಾರ್ಯಕ್ರಗಳು ಅರ್ಥ ಪೂರ್ಣವಾಗಿ ನಡೆಯುತ್ತಿದ್ದು  ಸಾಕಷ್ಟು ಜನರಿಗೆ ಇದರಿಂದ ಪ್ರಯೋಜನವಾಗಿದೆ ಎಂದು ತಿಳಿಸಿದರು.
  
ಮಂಚನಬಲೆಯಲ್ಲಿ ಎರಡನೇ ಬಾರಿಗೆ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮೊದಲನೇ ಬಾರಿಗೆ ಬಂದ ೨೩ ಅರ್ಜಿಗಳಲ್ಲಿ ೨೦ ಅರ್ಜಿಗಳು ಇತ್ಯರ್ಥವಾಗಿದ್ದು ಉಳಿದ ೩ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುವುದು ಎಂದರು.
    
ತಹಸೀಲ್ದಾರ್ ಎಲ್.ಸಿ.ನಾಗರಾಜ್ ಮಾತನಾಡಿ ಮಂಚನಬಲೆ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮ ಎರಡನೇ ಬಾರಿ ನಡೆಯುತ್ತಿದೆ. ಸಾರ್ವಜನಿಕರಿಂದ ಸ್ವೀಕರಿಸಲಾದ ಕುಂದುಕೊರತೆಗಳ ಅರ್ಜಿಗಳನ್ನು ಪರಿಹರಿಸಲಾಗುವುದು ಎಂದರು. 
  
ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ವೃದ್ಯಾಪ್ಯವೇತನ ಹಾಗೂ ವಿದವಾವೇತನ ಮಾಶಾಸನ ಪತ್ರಗಳನ್ನು ವಿತರಿಸಲಾಯಿತು.
  
ಸಮಾರಂಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಎಸ್.ನಾಯಕ್, ಜಿಲ್ಲಾ ರಕ್ಷಣಾಧಿಕಾರಿ ರವಿಂದ್ರ ಪ್ರಸಾದ್, ಉಪವಿಭಾಗಧಿಕಾರಿ ಜಿ.ವಿ.ಶೀನಪ್ಪ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಂ.ಜುಲ್ಫಿಕರುಲ್ಲಾ, ಗ್ರಾಮ ಪಂಚಾಯತ್ ಅಧ್ಯಕ್ಷಿಣಿ ನಾರಾಯಣಮ್ಮ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಎಂ. ಅಶ್ವಥಪ್ಪ ಹಾಗೂ ಎಲ್ಲಾ ಜಿಲ್ಲಾ ಮತ್ತು  ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. 

ಫೋಟೋ ವಿವರ
ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ಕಸಬ ಹೋಬಳಿಯ ಮಂಚನಬಲೆ ಗ್ರಾಮದಲ್ಲಿ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಕ್ಫ್ ಮತ್ತು ಅಲ್ಪಸಂಖ್ಯಾತರ ಖಾತೆ ಸಚಿವ ಡಾ. ಮುಮ್ತಾಜ್ ಅಲಿ ಖಾನ್ ಉದ್ಘಾಟಿಸಿದರು. ಶಾಸಕ ಕೆ.ಪಿ.ಬಚ್ಚೇಗೌಡ, ಜಿಲ್ಲಾ ರಕ್ಷಣಾಧಿಕಾರಿ ರವಿಂದ್ರ ಪ್ರಸಾದ್, ಗ್ರಾಮ ಪಂಚಾಯತ್ ಅಧ್ಯಕ್ಷಿಣಿ ನಾರಾಯಣಮ್ಮ, ಚಿತ್ರದಲ್ಲಿದ್ದಾರೆ.


Share: